
ಕಾರ್ಕಳ: ಸಂಕಷ್ಟದಲ್ಲಿದ್ದ ಬಡ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಿಸಿಕೊಡುವ ಮೂಲಕ ತಾನದಗುಡ್ಡೆ ಫ್ರೆಂಡ್ಸ್ ಹಾಗೂ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮಾನವೀಯತೆ ಮೆರೆದಿದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ತಾನದಗುಡ್ಡೆ ನಿವಾಸಿಗಳಾದ ಶಂಕರ ಮತ್ತು ಸವಿತಾ ದಂಪತಿಗಳು ತೀವ್ರ ಬಡತನದಿಂದಾಗಿ ವಾಸಕ್ಕೆ ಯೋಗ್ಯವಾದ ಮನೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರು. ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ತಾನದಗುಡ್ಡೆ ಫ್ರೆಂಡ್ಸ್ ಹಾಗೂ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಒಗ್ಗಟ್ಟಿನಿಂದ ನೆರವಿನ ಹಸ್ತ ಚಾಚಿ ನೂತನ ಮನೆಯ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದರು. ನೂತನ ಮನೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉದಯ್ ಶೆಟ್ಟಿ ಮುನಿಯಾಲು ಭಾಗವಹಿಸಿ ದಂಪತಿಗಳಿಗೆ ಮನೆಯ ಬೀಗದ ಕೀಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಭರತ್ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ಆನಂದ ಜೋಸೆಫ್, ತಾನದಗುಡ್ಡೆ ಫ್ರೆಂಡ್ಸ್ ಪ್ರಮುಖರಾದ ಮನೋಜ್ ಶೆಟ್ಟಿ, ಅರ್ಚಕರಾದ ಕೆಮ್ಮಣ್ಣು ರಾಧಾ ಭಟ್ ಸೇರಿದಂತೆ ಸ್ಥಳೀಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಾಮಾಜಿಕ ಕಾಳಜಿ, ಮಾನವೀಯತೆ ಮತ್ತು ಪರಸ್ಪರ ಸಹಕಾರದ ಮೂಲಕ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಸೂರು ಕಲ್ಪಿಸುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.





