ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಯ ಸಂಭ್ರಮದ ನಡುವೆಯೇ ಮೆಟ್ರೋ ಯೋಜನೆಗೆ ಅನುದಾನ ನೀಡುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಹೆಚ್ಚಿದೆ ಎಂಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಸಚಿವ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ.84ರಷ್ಟು ವೆಚ್ಚ ಭರಿಸುತ್ತಿದೆ ಎಂಬುದು ಸತ್ಯವಾಗಿದ್ದು, ಇತ್ತೀಚೆಗಷ್ಟೇ ರಾಜ್ಯ ಸರ್ಕಾರ 1,046 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೆಟ್ರೋ ಯೋಜನೆಗಾಗಿ ರಾಜ್ಯ ಸರ್ಕಾರ ಸಾಲ ಪಡೆಯುತ್ತಿದ್ದು, ಅದನ್ನು ಮರುಪಾವತಿಸುವ ಜವಾಬ್ದಾರಿಯೂ ರಾಜ್ಯ ಸರ್ಕಾರದ್ದೇ ಆಗಿದೆ. ಮೆಟ್ರೋಗೆ ಸ್ವಂತ ಆದಾಯದಿಂದ ಸಾಲ ತೀರಿಸುವ ಸಾಮರ್ಥ್ಯವಿಲ್ಲ. ಡಾಲರ್ ಮೌಲ್ಯದಲ್ಲಿನ ಬದಲಾವಣೆಯಿಂದಾಗಿ ಸಾಲ ಮರುಪಾವತಿಯ ಹೊರೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇನ್ನು ಸರ್ಜಾಪುರ ಭಾಗಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಗೆ ಎರಡು ವರ್ಷ ಕಳೆದರೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರದ ವೆಚ್ಚ ಹೆಚ್ಚಾಗಿದೆ ಎನ್ನುವುದಾದರೆ ಅದನ್ನು ಕಡಿತಗೊಳಿಸಿ ಅನುಮೋದನೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಕರ್ನಾಟಕ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಕೇಂದ್ರದಿಂದ ರಾಜ್ಯಕ್ಕೆ ಮರಳುವ ತೆರಿಗೆ ಪಾಲು ಬಹಳ ಕಡಿಮೆಯಿದ್ದು, ಪಾವತಿಸುವ ತೆರಿಗೆಯಲ್ಲಿ ಶೇ.20ರಷ್ಟೂ ವಾಪಸ್ ಬರುತ್ತಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
