ಬೆಂಗಳೂರು: ಬೆಂಗಳೂರಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ, ಯೋಗ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ವರನಟ ಡಾ. ರಾಜ್ಕುಮಾರ್ ಅವರ ಯೋಗಾಭ್ಯಾಸವನ್ನು ಉಲ್ಲೇಖಿಸಿದ ಮೋದಿ, ಅಣ್ಣಾವ್ರು ಕೂಡ ಯೋಗ ಮಾಡುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾ. ರಾಜ್ಕುಮಾರ್ ಅವರು ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಯೋಗ ಮತ್ತು ಪ್ರಾಣಾಯಾಮಕ್ಕೆ ಸಮಯ ಮೀಸಲಿಟ್ಟು, ಶಿಸ್ತುಬದ್ಧ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರು. ಯೋಗವನ್ನು ಕೇವಲ ದೈಹಿಕ ವ್ಯಾಯಾಮವಾಗಿ ನೋಡದೆ ಮಾನಸಿಕ ನೆಮ್ಮದಿ ಮತ್ತು ಸಮಗ್ರ ಆರೋಗ್ಯದ ಭಾಗವಾಗಿ ಅಳವಡಿಸಿಕೊಂಡಿದ್ದ ಅವರ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ. ಇನ್ನು 1975ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಕುಟೀರವು 50 ವರ್ಷಗಳಿಂದ ಆಧುನಿಕ ವಿಜ್ಞಾನ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ)ದ ವಸತಿ ಪ್ರಧಾನ ಕೇಂದ್ರವಾಗಿರುವ ಇಲ್ಲಿ ಯೋಗ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಹಾಗೂ ಯೋಗ ಚಿಕಿತ್ಸಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. 2002ರಲ್ಲಿ ಎಸ್-ವ್ಯಾಸಕ್ಕೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದ್ದು, ಆವರಣದಲ್ಲಿರುವ ಆರೋಗ್ಯಧಾಮವು ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳ ಮೂಲಕ ಸಮಗ್ರ ಆರೋಗ್ಯ ಸೇವೆ ಒದಗಿಸುತ್ತಿದೆ. ನವೆಂಬರ್ 13ರಿಂದ 23ರವರೆಗೆ ನಡೆಯಲಿರುವ ಸುವರ್ಣ ಮಹೋತ್ಸವಕ್ಕೆ ‘ವಿಕಸಿತ ಭಾರತ 2047 ಕಡೆಗೆ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ಆಡಳಿತಾತ್ಮಕ ಕಟ್ಟಡಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ ಕೇರಳದ ತಿರುವನಂತಪುರದಲ್ಲಿ ಎಸ್-ವ್ಯಾಸದ ಆಫ್-ಕ್ಯಾಂಪಸ್ಗೆ ಚಾಲನೆ ನೀಡಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನ 7.5 ಕಿಲೋಮೀಟರ್ ಉದ್ದದ ಪಿಂಕ್ಲೈನ್ ಮೆಟ್ರೋ ಮಾರ್ಗವನ್ನು ಎಸ್.ಜಿ. ಪಾಳ್ಯ ನಿಲ್ದಾಣದಲ್ಲಿ ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದು, ಎಸ್.ಜಿ. ಪಾಳ್ಯ, ಜಯನಗರ, ಐಐಎಂ-ಬಿಳೇಕಹಳ್ಳಿ ಹಾಗೂ ಕಾಳೇನ ಅಗ್ರಹಾರ ಸೇರಿದಂತೆ ಪ್ರಮುಖ ಪ್ರದೇಶಗಳ ಸಂಪರ್ಕಕ್ಕೆ ಅನುಕೂಲವಾಗಲಿದೆ. ಒಟ್ಟಿನಲ್ಲಿ ಪ್ರಶಾಂತಿ ಕುಟೀರದ ಐದು ದಶಕಗಳ ಯೋಗ ಸೇವೆಯ ಸಂಭ್ರಮದ ವೇದಿಕೆಯಲ್ಲಿ ಅಣ್ಣಾವ್ರ ಯೋಗ ಸಾಧನೆಯನ್ನು ಪ್ರಧಾನಿ ಸ್ಮರಿಸಿರುವುದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ.
