
ಚಾಮರಾಜನಗರ: ಕರ್ನಾಟಕದ ಪ್ರಾಚೀನ ಹಾಗೂ ವೈಶಿಷ್ಟ್ಯಪೂರ್ಣ ಕಲೆಗಳಲ್ಲಿ ಒಂದಾದ ಗಮಕ ಕಲೆಯ ಸಂರಕ್ಷಣೆ, ಪ್ರಚಾರ ಮತ್ತು ಪ್ರೋತ್ಸಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಗಮಕ ಕಲಾ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. 1982ರ ಅಕ್ಟೋಬರ್ 2ರಂದು ಕರ್ನಾಟಕ ಗಮಕ ಕಲಾ ಪರಿಷತ್ತು ಅಸ್ತಿತ್ವಕ್ಕೆ ಬಂದಿದ್ದು, ಕಾವ್ಯವಾಚನ, ಕಾರ್ಯಾಗಾರ, ತರಬೇತಿ, ಸಾಹಿತ್ಯ ಪ್ರಕಟಣೆ, ಕಮ್ಮಟ, ಸಮ್ಮೇಳನ, ಸ್ಪರ್ಧೆ ಹಾಗೂ ಗಮಕ ಪರೀಕ್ಷೆಗಳ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು. ಒಂದು ಕಾಲದಲ್ಲಿ ಚಾಮರಾಜನಗರ ಜಿಲ್ಲೆ ಗಮಕ ಕಲೆಯ ತವರೂರಾಗಿತ್ತು. ರಾಮಸಮುದ್ರ, ಹರದನಹಳ್ಳಿ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ಸೇರಿದಂತೆ ಹಲವು ಭಾಗಗಳಲ್ಲಿ ಗಮಕ ಕಲೆ ವ್ಯಾಪಕವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರೋತ್ಸಾಹದ ಕೊರತೆಯಿಂದ ಕಲೆ ಸೊರಗುತ್ತಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಹಾಗೂ ಯುವಕರಿಗೆ ಗಮಕ ಕಲಿಯಲು ಪ್ರೋತ್ಸಾಹ ನೀಡಬೇಕು. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಅಮೂಲ್ಯ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಬರಹಗಾರ ಎಸ್. ಲಕ್ಷ್ಮೀನರಸಿಂಹ ಮಾತನಾಡಿ, ಮೈಸೂರು ಸಂಸ್ಥಾನದ ಮಹಾರಾಜರ ಪ್ರೋತ್ಸಾಹದಿಂದ ಗಮಕ ಕಲೆ ಹಿಂದೆ ಬಹಳಷ್ಟು ಬೆಳವಣಿಗೆ ಕಂಡಿತ್ತು. ಚಾಮರಾಜನಗರದ ರಾಮದಾಸ್, ರಾಜಗೋಪಾಲ್, ನಾಗೇಶ್ ರಾವ್, ಸುಬ್ರಹ್ಮಣ್ಯಂ ಹಾಗೂ ತಿಪಟೂರು ರಾಮಸ್ವಾಮಿ ಸೇರಿದಂತೆ ಹಲವು ಶ್ರೇಷ್ಠ ಗಮಕಿಗಳು ತಮ್ಮ ಕಲೆಯ ಮೂಲಕ ಪ್ರಸಿದ್ಧರಾಗಿದ್ದರು. ಇದೀಗ ಗಮಕ ಕಲೆಗೆ ಮತ್ತೆ ಉತ್ತೇಜನ ನೀಡುವ ಅಗತ್ಯವಿದ್ದು, ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ತಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಬಿ.ಕೆ. ರವಿಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಜಿಲ್ಲೆಯಲ್ಲಿ ಗಮಕ ಕಲೆಯ ಪ್ರಸಾರ ಹೆಚ್ಚಾಗಿ ಆಸಕ್ತರಿಗೆ ಕಲಿಕೆಯ ಅವಕಾಶ ದೊರೆಯಲಿ ಎಂದು ಆಶಿಸಿದರು. ಇದೇ ವೇಳೆ ಗಮಕ ಕಲಾವಿದರಾದ ವೀರಶೆಟ್ಟಿ ಹಾಗೂ ವಿಜಯಲಕ್ಷ್ಮಿ ಅವರು ಗಮಕ ವಾಚನ ನಡೆಸಿ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಹಲವು ಗಮಕ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.




