
ಶೃಂಗೇರಿ: ಪಟ್ಟಣದ ಹೃದಯ ಭಾಗದಲ್ಲಿರುವ ಗೋರಿಗುಡ್ಡದಲ್ಲಿ ಮಸೀದಿ ರಕ್ಷಣೆಗೆ ಶಾಸಕರ ವಿಶೇಷ ಅನುದಾನದಡಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ಕಾಂಕ್ರೀಟ್ ತಡೆಗೋಡೆ ಕೇವಲ ಎರಡು ತಿಂಗಳಲ್ಲೇ ಬಿರುಕು ಬಿಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭಾರೀ ಮಳೆಯ ಹಿನ್ನೆಲೆ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ತಡೆಗೋಡೆ ಕೆಳಭಾಗದಲ್ಲಿರುವ ಮನೆಗಳು ಹಾಗೂ ವ್ಯಾಪಾರಸ್ಥರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದ್ದು, ತಡೆಗೋಡೆ ಕುಸಿದರೆ ಮೇಲ್ಭಾಗದಲ್ಲಿರುವ ದರ್ಗಾ, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಕಚೇರಿ ಕಟ್ಟಡಕ್ಕೂ ಹಾನಿಯಾಗುವ ಭೀತಿ ವ್ಯಕ್ತವಾಗಿದೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಲ್ಲ ಹಾಗೂ ತೆರಿಗೆ ಹಣದ ದುರ್ಬಳಕೆ ನಡೆದಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ಪರಿಶೀಲನೆ ನಡೆಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಮಗಾರಿಯ ಗುಣಮಟ್ಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




