
ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ–169ರ ತನಿಕೋಡ್ನಿಂದ ಎಸ್.ಕೆ. ಬಾರ್ಡರ್ವರೆಗಿನ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದ್ದು, ಶಿಥಿಲಗೊಂಡಿರುವ ನಾಲ್ಕು ಕಿರು ಸೇತುವೆಗಳ ಸುರಕ್ಷತಾ ದೃಷ್ಟಿಯಿಂದ 2026ರ ಸೆಪ್ಟೆಂಬರ್ 30ರವರೆಗೆ 12 ಟನ್ಗಿಂತ ಹೆಚ್ಚು ತೂಕದ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. 1950–60ರ ದಶಕದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಗಳ ಕಂಬಗಳು ಶಿಥಿಲಗೊಂಡಿದ್ದು, ಕಾಂಕ್ರೀಟ್ ಉದುರಿ ಕಬ್ಬಿಣದ ಸರಳುಗಳು ಹೊರಬಂದಿರುವ ಕಾರಣ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾದರೆ ಸೇತುವೆಗಳು ಕುಸಿಯುವ ಅಪಾಯ ಎದುರಾಗಿದೆ. ಇದೇ ಕಾರಣದಿಂದ ಟಿಪ್ಪರ್ಗಳು, ಭಾರೀ ಲಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಜೊತೆಗೆ ಈ ಮಾರ್ಗವು ಕಡಿದಾದ ತಿರುವುಗಳು ಹಾಗೂ ಏಕಪಥ ರಸ್ತೆಯನ್ನು ಹೊಂದಿರುವುದರಿಂದ ಮಳೆಯ ವೇಳೆ ಭಾರೀ ವಾಹನಗಳು ರಸ್ತೆಯ ಅಂಚಿನಲ್ಲಿ ಸಿಲುಕಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರದಿಂದ ಬರುವ ವಾಹನಗಳು ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ ಮಾರ್ಗವಾಗಿ ಎಸ್.ಕೆ. ಬಾರ್ಡರ್ಗೆ ತೆರಳಬೇಕು. ಕೊಪ್ಪ ಕಡೆಯಿಂದ ಬರುವವರು ಕೊಪ್ಪ–ಜಯಪುರ–ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬದಲಿ ಮಾರ್ಗಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವವರು ತಮ್ಮ ಪ್ರಯಾಣದ ಯೋಜನೆಯನ್ನು ಮುಂಚಿತವಾಗಿಯೇ ಬದಲಿಸಿಕೊಳ್ಳುವಂತೆ ಜಿಲ್ಲಾಡಳಿತ ತಿಳಿಸಿದೆ.




