
ಬ್ರಹ್ಮಾವರ: ಆತ್ಮಿಕಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ., ಬ್ರಹ್ಮಾವರ ಇದರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 05-07-2026 ರವಿವಾರದಂದು ಕೃಷ್ಣಗಿರಿ ಆರ್ಕೆಡ್ 3ನೇ ಮಹಡಿ, ಆಕಾಶವಾಣಿ ವೃತ್ತ, ಬ್ರಹ್ಮಾವರದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ರಘುರಾಮ ಮರಕಾಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಬೆಂಗಳೂರು ಇದರ ನಿರ್ದೇಶಕರು ಹಾಗೂ ಸಂಘದ ಕಾಯ್ದೆ ಸಲಹೆಗಾರರಾದ ಶ್ರೀ ಮಂಜುನಾಥ್ ಎಸ್.ಕೆ, ಉಡುಪಿ ಸೌಹಾರ್ದ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಂಪಾರು ಜಗನ್ನಾಥ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿಜಯ್ ಬಿ.ಎಸ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಕ್ಷಿತ್ ಅವರು ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ, ಕಳೆದ ಸಾಲಿನ ಆರ್ಥಿಕ ಸಾಧನೆಗಳು ಹಾಗೂ ಸಂಘದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಈ ವೇಳೆ ಮಾತನಾಡಿದ ಶ್ರೀ ಮಂಜುನಾಥ್ ಎಸ್.ಕೆ ಅವರು ಸಂಘವು ಆರ್ಥಿಕವಾಗಿ ಉತ್ತಮ ಪ್ರಗತಿ ಸಾಧಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಸಹಕಾರಿಯು ಸದಸ್ಯರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಸೇವೆಗಳನ್ನು ನೀಡಿದರೆ ಮಾತ್ರ ನಿರಂತರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯದಕ್ಷತೆಯ ಮೂಲಕ ತಮ್ಮದೇ ಆದ ಸಾಧನೆಯ ಪಯಣ ರೂಪಿಸಿಕೊಂಡ ವಿವಿಧ ಸೌಹಾರ್ದ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕುಮಾರಿ ಸಾತ್ವಿಕ ಶ್ರೀಯನ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸದಸ್ಯರು ಸಂಘವು ನಿರಂತರವಾಗಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಸೇವೆ ನೀಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಸಂಘದ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರು, ಸದಸ್ಯರು, ಗಣ್ಯರು ಹಾಗೂ ಸಿಬ್ಬಂದಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.




