
ಶೃಂಗೇರಿ : ಶೃಂಗೇರಿಯ ಜ್ಞಾನಭಾರತೀ ವಿದ್ಯಾಕೇಂದ್ರದಲ್ಲಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದ್ದು, ಜಿಲ್ಲೆಯ ವಿದ್ಯಾಭಾರತಿಯ 6 ಶಾಲೆಗಳಿಂದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸೇರಿದಂತೆ ಸುಮಾರು 170 ಜನ ಸೇರಿದ್ದರು. ಸಹಮಿಲನಕ್ಕೆ ಆಗಮಿಸಿದ್ದ ಸರ್ವರನ್ನು ಅರಿಶಿನ-ಕುಂಕುಮ, ಹೂ ನೀಡಿ, ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಸರಸ್ವತಿ ವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಜ್ಞಾನಭಾರತಿ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್, ವಿದ್ಯಾಭಾರತಿ ಕರ್ನಾಟಕ ಚಿಕ್ಕಮಗಳೂರು ಜಿಲ್ಲಾಘಟಕದ ಅಧ್ಯಕ್ಷರಾದ ಶ್ರೀ ಗುರುಮೂರ್ತಿ, ಚಿಕ್ಕಮಗಳೂರು ಜಿಲ್ಲಾಘಟಕದ ಕಾರ್ಯದರ್ಶಿಗಳಾದ ಶ್ರೀ ಆನಂದ್, ಕರ್ನಾಟಕ ದಕ್ಷಿಣ ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ್, ಶ್ರೀ ಉಮೇಶ್ ಹಾಗೂ ಅತಿಥಿಗಳಾದ ಶ್ರೀಪತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಯುತ ಗುರುಮೂರ್ತಿಯವರು ಶಿಕ್ಷಣದ ಧ್ಯೇಯೊದ್ದೇಶಗಳು ಹಾಗೂ ಅವಶ್ಯಕತೆಗಳ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಉಮೇಶ್ ಅವರು ವಂದೇ ಮಾತರಂ ಗೀತೆಯ ಹಿನ್ನೆಲೆ ಕುರಿತು ಉಪನ್ಯಾಸ ನೀಡಿದರು. ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀಪತಿಯವರು ಶಿಕ್ಷಕರು ತರಗತಿಯಲ್ಲಿ ಮಾಡಬೇಕಾದ ಚಟುವಟಿಕೆಗಳು , ಬೆಳೆಸಿಕೊಳ್ಳಬೇಕಾದ ವೈಜ್ಞಾನಿಕ ದೃಷ್ಟಿಕೋನದ ಕುರಿತು ತೆಳು ಹಾಸ್ಯಭರಿತವಾಗಿ ಶಿಕ್ಷಕರಿಗೆ ಮನಮುಟ್ಟುವಂತೆ ಮಾತನಾಡಿದರು. ನೆರೆದಿದ್ದ ಸಹೃದಯರಲ್ಲಿ ವಿದ್ಯಾಭಾರತಿಯ ಧ್ಯೇಯದಂತೆ ಬಂಧಗಳನ್ನು ಬೆಸೆದ ಸಹಮಿಲನ ಕಾರ್ಯಕ್ರಮ ಕೊನೆಯಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಸಂಪನ್ನಗೊಂಡಿತು.




