
ಕಾರ್ಕಳ: ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಹಾಗೂ ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ) ಲಿಮಿಟೆಡ್ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ) ಲಿಮಿಟೆಡ್ನ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿಭಾಗದ 12 ವಿದ್ಯಾರ್ಥಿಗಳಿಗೆ ತಲಾ ₹10,000 ಹಾಗೂ ಎಸ್ಎಸ್ಎಲ್ಸಿ ವಿಭಾಗದ 12 ವಿದ್ಯಾರ್ಥಿಗಳಿಗೆ ತಲಾ ₹5,000ರಂತೆ ಒಟ್ಟು 24 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೇವಿ ಪ್ರಸಾದ್ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಸಮಸ್ಯೆಯಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಸಹಾಯ ಮಾಡುವ ದಾನಿಗಳು ಸಾಕಷ್ಟು ಇದ್ದು, ವಿದ್ಯಾರ್ಥಿಗಳು ಅಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅರ್ಹತೆ ಹೊಂದಿದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ) ಲಿಮಿಟೆಡ್ನ ಪಾಲುದಾರ ಹಾಗೂ ವಿದ್ಯಾರ್ಥಿವೇತನಕ್ಕಾಗಿ ಒಟ್ಟು ₹1.80 ಲಕ್ಷ ದೇಣಿಗೆ ನೀಡಿದ ಸಿ.ಎ. ಹರೀಶ್ ಕಾರ್ಕಳ, ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳ ಪರಿಶ್ರಮ, ನಿರಂತರ ಪ್ರಯತ್ನ ಹಾಗೂ ಶಿಕ್ಷಕರ ಪ್ರೇರಣೆ ಇದ್ದರೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷ ವಿಜಯ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ನಿತ್ಯಾನಂದ ಪೈ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರ್ಮುಂಡೆಯ ಶಿಕ್ಷಕ ಸಂತೋಷ್ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯ ಯೋಗೀಶ್ ಸಾಲ್ಯಾನ್, ಕಾಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ವೈಕುಂಠ ಶೆಣೈ ಹಾಗೂ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿನಿ ಸಂಜನಾ ಪಿ. ಪ್ರಾರ್ಥಿಸಿದರು. ವಸಂತ್ ಎಂ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸದಾನಂದ ವಂದಿಸಿದರು.




