
ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು ಗಂಭೀರ ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರು ಸ್ವಯಂಚಾಲಿತವಾಗಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳುವಂತೆ ಮಾಡುವ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂತಿಮ ಹಂತ ತಲುಪಿದೆ. ಈ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಜುಲೈ 17ರಂದು ತನ್ನ ಅಂತಿಮ ವರದಿಗೆ ಅನುಮೋದನೆ ನೀಡುವ ಸಾಧ್ಯತೆ ಇದ್ದು, ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ.
ಮಸೂದೆಯ ಪ್ರಕಾರ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಸಚಿವರು ಹುದ್ದೆಯಿಂದ ತೆರವುಗೊಳ್ಳಲಿದ್ದಾರೆ. ಇದೇ ನಿಯಮ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೂ ಅನ್ವಯವಾಗಲಿದ್ದು, 30 ದಿನಗಳೊಳಗೆ ರಾಜೀನಾಮೆ ನೀಡದಿದ್ದರೆ 31ನೇ ದಿನದಿಂದಲೇ ಹುದ್ದೆ ಕಳೆದುಕೊಳ್ಳುವ ವ್ಯವಸ್ಥೆಯನ್ನು ಮಸೂದೆ ಪ್ರಸ್ತಾಪಿಸಿದೆ. ಬಿಡುಗಡೆಯಾದ ನಂತರ ಕಾನೂನುಬದ್ಧವಾಗಿ ಮತ್ತೆ ಹುದ್ದೆಗೆ ನೇಮಕವಾಗುವ ಅವಕಾಶವೂ ಇರಲಿದೆ
ಆದರೆ, ಈ ಮಸೂದೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತನಿಖಾ ಸಂಸ್ಥೆಗಳ ದುರುಪಯೋಗದ ಮೂಲಕ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಅಥವಾ ಸಚಿವರನ್ನು ಉದ್ದೇಶಪೂರ್ವಕವಾಗಿ 30 ದಿನಗಳ ಕಾಲ ಜೈಲಿನಲ್ಲಿ ಇರಿಸಿ ಸರ್ಕಾರಗಳನ್ನು ಅಸ್ಥಿರಗೊಳಿಸುವ ಸಾಧ್ಯತೆ ಇದೆ ಎಂದು ಹಲವು ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಪ್ರಕರಣಗಳಿಂದ ರಕ್ಷಣೆ ನೀಡುವ ಕೆಲವು ಸುರಕ್ಷತಾ ಕ್ರಮಗಳನ್ನು ಜೆಪಿಸಿ ವರದಿಯಲ್ಲಿ ಸೇರಿಸುವ ಕುರಿತು ಚರ್ಚೆ ನಡೆದಿದೆ.
ಮಸೂದೆಗೆ ಬೆಂಬಲ ವ್ಯಕ್ತಪಡಿಸುವವರು, ಸಾರ್ವಜನಿಕ ಜೀವನದಲ್ಲಿ ನೈತಿಕತೆ, ಹೊಣೆಗಾರಿಕೆ ಹಾಗೂ ಪಾರದರ್ಶಕತೆ ಹೆಚ್ಚಿಸಲು ಇದು ಅಗತ್ಯ ಕ್ರಮ ಎಂದು ವಾದಿಸುತ್ತಿದ್ದಾರೆ. ಮತ್ತೊಂದೆಡೆ, ಆರೋಪ ಸಾಬೀತಾಗುವ ಮುನ್ನವೇ ಕೇವಲ ಬಂಧನದ ಆಧಾರದಲ್ಲಿ ಹುದ್ದೆ ಕಳೆದುಕೊಳ್ಳುವ ವ್ಯವಸ್ಥೆ ನ್ಯಾಯಸಮ್ಮತವೇ ಎಂಬ ಪ್ರಶ್ನೆಯನ್ನು ಕಾನೂನು ತಜ್ಞರು ಹಾಗೂ ವಿರೋಧ ಪಕ್ಷಗಳು ಎತ್ತಿವೆ. ಮಸೂದೆ ಸಂಸತ್ತಿನಲ್ಲಿ ಮಂಡನೆಯಾದ ಬಳಿಕ ಇದರ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.




