ದಕ್ಷಿಣಕನ್ನಡ: ಮೂಲ್ಕಿ, ಕಿನ್ನಿಗೊಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸುಮಾರು 84 ಲಕ್ಷ ವಂಚಿಸಲು ಪ್ರಯತ್ನಿಸಿದ್ದ ಮುಂಬೈನ ವಂಚನಾ ಜಾಲವು ಬ್ಯಾಂಕ್ ವ್ಯವಸ್ಥಾಪಕರ ಹಾಗು ಮೂಲ್ಕಿ ಪೊಲೀಸರ ಮಧ್ಯಪ್ರವೇಶದಿಂದಾಗಿ ವಿಫಲಗೊಂಡಿದೆ. ದಂಪತಿಗಳಿಗೆ ವಿಡಿಯೋ ಕರೆ ಮಾಡಿ ನಕಲಿ ಆಧಾರ್ ಕಾರ್ಡ್ ತೋರಿಸಿ ಬೆದರಿಸಿದ ವಂಚಕರು, ತಕ್ಷಣ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸದಿದ್ದರೆ, ನಿಮ್ಮನ್ನು ಸಾಯಿಸಬೇಕಾಗುತ್ತದೆ ಎಂದು ಹೆದರಿಸಿದ್ದರಿಂದ ದಂಪತಿ ಬ್ಯಾಂಕ್ ವ್ಯವಸ್ಥಾಪಕರಿಗೆ ಒತ್ತಡ ಹೇರಿ ಹಣವನ್ನು ವರ್ಗಾಯಿಸಿದ್ದರು. ಇದರಿಂದ ಸಂಶಯಗೊಂಡ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರ ವಿಚಾರಣೆ ಬಳಿಕ ಡಿಜಿಟಲ್ ಅರೆಸ್ಟ್ ಕೃತ್ಯ ಬೆಳಕಿಗೆ ಬಂದಿದ್ದು ವಂಚಕರು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿದ ಹಣವನ್ನು ಬ್ಯಾಂಕಿನವರು ತಡೆಹಿಡಿದಿದ್ದ ಕಾರಣ ವಂಚಕರ ಕೃತ್ಯ ವಿಫಲವಾಗಿದೆ ಎಂದು ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಬಿ.ಎಸ್ ಅವರು ತಿಳಿಸಿದ್ದಾರೆ.
