
ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈ ಹಿಂದ್ ಪ್ರತಿಷ್ಠಾನ ವತಿಯಿಂದ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅವರು, ತಾಯಿ ಕಂಡ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಸಾಮ್ರಾಜ್ಯವನ್ನೇ ನಿರ್ಮಿಸಿದ ಮಹಾಯುಗಪುರುಷ ಶಿವಾಜಿ ಮಹಾರಾಜರು ಧೈರ್ಯ ಮತ್ತು ಸಾಹಸದ ಪ್ರತೀಕವಾಗಿದ್ದು, ಉತ್ತರ ಭಾರತದ ಮೊಘಲರು ಹಾಗೂ ದಕ್ಷಿಣದ ಆದಿಲ್ ಶಾಹಿ ವಂಶಸ್ಥರನ್ನು ಎದುರಿಸಿ ಛತ್ರಪತಿ ಬಿರುದಿನ ಮೂಲಕ ಸ್ವರಾಜ್ಯ ಸ್ಥಾಪಿಸಿ ಜಗತ್ತಿಗೆ ಮಾದರಿಯಾದ ಆಡಳಿತ ವ್ಯವಸ್ಥೆಯನ್ನು ನೀಡಿದ ಭಾರತೀಯರ ಹೆಮ್ಮೆಯ ಪುಣ್ಯಪುರುಷರು ಎಂದು ಹೇಳಿದರು. ಅವರ ಸೈನ್ಯ ಸಂಘಟನೆ, 300ಕ್ಕೂ ಹೆಚ್ಚು ಕೋಟೆಗಳ ನಿರ್ಮಾಣ, ನೌಕಾಪಡೆ ಸ್ಥಾಪನೆಯ ಮೂಲಕ ನೌಕಾಪಡೆಯ ಪಿತಾಮಹರೆಂಬ ಕೀರ್ತಿ, ಸ್ತ್ರೀಯರ ಗೌರವ ಮತ್ತು ರಕ್ಷಣೆ, ಗೋಸಂಪತ್ತಿನ ಹಾಗೂ ಪ್ರಜಾಸಂರಕ್ಷಣೆ ಮಾದರಿಯಾದದ್ದು, ಹಾಗೂ ಯುವಜನತೆಗೆ ಶಿವಾಜಿ ಇತಿಹಾಸ, ಮೌಲ್ಯಾಧಾರಿತ ಆಡಳಿತವನ್ನು ವ್ಯಾಪಕವಾಗಿ ಪರಿಚಯಿಸುವ ಅಗತ್ಯವಿದೆ ಎಂದರು. ಇದೇ ವೇಳೆ ಉಪನ್ಯಾಸಕ ಸುರೇಶ್ ದೊಡ್ಡ ಮೋಳೆ ಮಾತನಾಡಿ ಶಿವಾಜಿ ಮಹಾರಾಜರು ಕಾರ್ಯಶೀಲತೆ, ಧೈರ್ಯ, ಸಾಹಸ ಮತ್ತು ಮಾತೃಭಕ್ತಿಯ ಆದರ್ಶ ವ್ಯಕ್ತಿಯಾಗಿದ್ದು, ಗುರುಗಳ ಸಮಗ್ರ ಮಾರ್ಗದರ್ಶನ ದೊರಕಿದರೆ ಶಿವಾಜಿಯಂತಹ ಸಾವಿರಾರು ಯುವಕರು ಹೊರಹೊಮ್ಮುತ್ತಾರೆ ಎಂದು ಹೇಳಿ, ಒಳ್ಳೆಯ ಭಾವನೆಯಿಂದ ಉತ್ತಮ ಕಾರ್ಯಗಳನ್ನು ಮಾಡೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮನೋಜ್, ಸೂರ್ಯ, ಹರೀಶ್, ಗಣೇಶ್, ಪಾಂಡು, ಚೇತನ್, ಶ್ರಾವ್ಯ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.




